Tuesday, December 8, 2009

ಒಗ್ಗಟ್ಟಿನಲ್ಲಿ ಬಲವಿದೆ..ಗೆಲುವಿದೆ........!






ಕೃಷಿಕರೆಲ್ಲ ಈ ವರ್ಷ ಸುಗ್ಗಿ ಮಾಡಲು ಜನರ ಅಭಾವದಿಂದ ತತ್ತರಿಸುವಂತಾಗಿದೆ.
ಒಮ್ಮೆಲೆ ಹೀಗಾಗಲು ಕಾರಣ ತಿಳಿಯುತ್ತಿಲ್ಲ,  ಉದ್ಯೋಗ ಖಾತ್ರಿ, ಕಡಿಮೆ ಬೆಲೆಗೆ ರೇಷನ್,
ಹಳ್ಳಿಗಳಿಂದ ಪೇಟೆಗೆ ವಲಸೆ ಇವುಗಳೆಲ್ಲದರ ಫಲಶ್ರುತಿ  ಕೃಷಿಕ್ಷೇತ್ರದ ಮೇಲೆ ಪರಿಣಾಮ ಬೀರಿದೆ ಎಂಬುದು ನನ್ನ ಅನಿಸಿಕೆ.
ನಮ್ಮದು ಕೃಷಿ ಕೂಡು ಕುಟುಂಬ, ಕೆಲಸಗಾರರ ಅಭಾವ ನಮಗೂ ತಟ್ಟಿದೆಯಾದರೂ,
ಮನೆಯ ಸದಸ್ಯರೆಲ್ಲಾ ಕೂಡಿ ಹರ ಸಾಹಸದಿಂದ ಈ ವರ್ಷದ ಸುಗ್ಗಿ ಮಾಡಲು ಶ್ರಮಿಸುತ್ತಿದ್ದೇವೆ.
ಪ್ರತಿ ವರ್ಷಕ್ಕಿಂತಾ ಈ ವರ್ಷದ ಸುಗ್ಗಿ ಸ್ವಲ್ಲ ಶ್ರಮದಾಯಕವಾದರೂ ಕೂಡ ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಕೆಲಸ ಹಂಚಿ ಹೋಗಿ ಸುಲಭವಾಯ್ತೆಂಬುದು ನನ್ನ ಭಾವನೆ.
ಈಗ ನಮ್ಮ ಹಳ್ಳಿಗಳಲ್ಲೂ ಕೂಡ ಬರೀ ಗಂಡ ಹೆಂಡತಿ, ಮಗುವಿನ ಚಿಕ್ಕ ಚೊಕ್ಕ ನ್ಯೂಕ್ಲಿಯರ್‍ ಸಂಸಾರಗಳೇ ಅಧಿಕ.
ಕೂಡಿ ಬಾಳಿದರೆ ಸ್ವರ್ಗ ಎಂಬ ನಾಣ್ಣುಡಿ ಈ ಸುಗ್ಗಿಯ ಕಾಲದಲ್ಲಾದರು ನೆನಪಿಸಿಕೊಳ್ಳುವಂತಾಗಿರುವುದು ಹಳ್ಳಿಗರ ದೌರ್ಭಾಗ್ಯವೇ ಸರಿ.......

Thursday, November 26, 2009

ನನ್ನ ಸೆಲ್ ಫೋನ್ ಮಾಡಿದ ಅವಾಂತರ...........!!!!!!!!!!!!

ನನಗೆ ಸೆಲ್ ಫೋನ್ ಹುಚ್ಚು ಬಹಳ ಇಲ್ಲವಾದರೂ ಮೊದಲ ಫೋನ್ ಹಳೆಯದಾಗಿ, ಹಾಳಾದ ಮೇಲೆ ಅನಿವಾರ್ಯವಾಗಿ ಬದಲಾಯಿಸಿದೆ.
ಹೊಸ ಫೋನ್, ಸಾಕಷ್ಟು  ಉತ್ತಮ ಮಾದರಿಯದಾಗಿತ್ತು.  ಎಲ್ಲವನ್ನು ಟ್ರಯಲ್ ಎರರ್‍ ಮಾಡಿ ಕಲಿತೆ.
ಅದರಲ್ಲಿ ಸಂದೇಶ ಕಳಿಸುವ ಮೆನುವಿನಲ್ಲಿ ಒಂದು ಆಯ್ಕೆ, ಎಸ್‌ಓಎಸ್ ಮೆಸೇಜಿಂಗ್. ಅಂದರೆ ಯಾವುದಾದರು ಅತೀ ಅನಿವಾರ್ಯ ಸಂದರ್ಭದಲ್ಲಿ ನಿಮ್ಮ ಗೆಳೆಯರಿಗೆ ತುರ್ತು ಸಂದೇಶ ಕಳಿಸುವ ವ್ಯವಸ್ತೆ.
ನಾನು ಉತ್ಸಹದಿಂದ ನನ್ನ ಸೋದರಿ ಮತ್ತು ನನ್ನ ಗೆಳೆಯನ ಸೆಲ್ ನಂಬರ್‍ ಅದರಲ್ಲಿ ಬರೆದು ಮರೆತು ಬಿಟ್ಟೆ.
ಆದರೆ ಮೊನ್ನೆ ಅನಿರೀಕ್ಷಿತವಾಗಿ ಶನಿವಾರ ಸಂಜೆ ನನ್ನ ಸೋದರಿ ಕರೆ ಮಾಡಿ ನಿನಗೆ ಏನು ತೊಂದರೆಯಾಗಿದೆ? ಎಂದು ಕೇಳಿದಾಗ ನನಗೆ ಎರಡು ರೀತಿಯ ಆಶ್ಚರ್ಯವಾಯ್ತು. ಏಕೆಂದರೆ ಆಕೆ ಹಲವಾರು ದಿನಗಳಿಂದ ನನ್ನೊಂದಿಗೆ ಏಕೋಮುನಿಸಿಕೊಂಡು ಮಾತು -ಕಥೆ ಎಲ್ಲಾ ಬಂದ್ ಆಗಿತ್ತು.
ಆಮೇಲೆ ತಿಳಿದು ಬಂದಿದ್ದು, ನನ್ನ ಸೆಲ್ ನಿಂದ ಬಂದ ಹೆಲ್ಪ್ ಮೀ , ನಾನು ತೊಂದರೆಯಲ್ಲಿದ್ದೇನೆ, ತಕ್ಷಣ ಕರೆ ಮಾಡಿ ಎಂಬ
ಸಂದೇಶ ಓದಿ ಮನ ಕರಗಿ ಆಕೆ ಕರೆ ಮಾಡಿದ್ದಳಂತೆ..!
ನಾನು ಆಕೆಗೆ ಆ ಥರದ ಯಾವುದೇ ಸಂದೇಶ ಕಳಿಸಿಲ್ಲವೆಂದು ಸಾರಿ ಸಾರಿ ಹೇಳಿದೆ.
ಆದರೂ ನನ್ನೊಳಗೆ ಇದು ಹೇಗಾಯ್ತು ಎಂಬ ಚಿಂತೆ ಶುರುವಾಗಿ ಫೋನ್ ಸೆಟ್ಟಿಂಗ್ಸ್ ಎಲ್ಲ ನೋಡಿದಾಗ ಗೊತ್ತಾಯ್ತು,
ಆ ಎಮರ್‍ಜೆನ್ಸಿ ಕರೆ ಹೋಗಲು ವಾಲ್ಯೂಂ ಕೀ ನಾಲ್ಕು ಬಾರಿ ಪ್ರೆಸ್ ಮಾಡಬೇಕು ಎಂದು...!
ಆ ಸಂಜೆ ಒಂದಾದ ಮೇಲೊಂದು ಕರೆ ಬರುವಾಗ ಕೈಯಲ್ಲಿ ಫೋನ್ ಇತ್ತು ಮತ್ತು ಬೆರಳುಗಳ ಮಂಗಚೇಷ್ಟೆ ಇಂದ ಆ ರೀತಿ ಆಗಿದೆ ಎಂದು...!
ಆದರೆ ನನ್ನ ತಂಗಿಯಿಂದ ನಾನು ಇನ್ನೂ ದೂರ ಹೋಗುವಂತೆ ಆಗಿದೆ ಮತ್ತು ಆಕೆ ನನ್ನ ಮಾತು ನಂಬುವ ಸ್ಥಿತಿಯಲ್ಲೂ ಇಲ್ಲ..!
ಬಹುಶ: ನಿಜವಾಗಲೂ ನಾನು ತೊಂದರೆಗೀಡಾದರೂ ಆಕೆ ಆ ವಿಚಾರ ನಂಬಲಾರಳು......
ಗೆಳೆಯರೆ ಆಧುನಿಕ ಉಪಕರಣಗಳಿಂದಾ ಯಾವ ರೀತಿ ಪೇಚಾಟ ಆಗುತ್ತೆ ನೋಡಿದಿರಾ...?

Friday, November 20, 2009

hindumane.blogspot.com: ಅಮೃತಧಾರೆ....

hindumane.blogspot.com: ಅಮೃತಧಾರೆ....

ಅಮೃತಧಾರೆ....

ದೇವತೆಗಳು, ದಾನವರು
                                    ಅಮರತ್ವಕ್ಕಾಗಿ ಕಡೆದರು ಕಡಲನ್ನು,

ಹಾಲಾಹಲದ ನಂತರ

ದೇವತೆಗಳಿಗೆ ದೊರೆಯಿತು ಅಮೃತವು...

ಬೇಡ ಎನಗೆ ಅಮೃತವೂ  ಅಮರತ್ವವೂ

                                     ಸಾಕೆನಗೆ ಬರೀ ಸ್ನೇಹ  ಪ್ರೀತಿ  ಈ ಜನ್ಮದಲ್ಲಿ.
ಹಾಗಾಗಿ ಸ್ನೇಹದ ಕಡಲ ಕಡೆಯುತ

ಕಾಯುತ್ತಿರುವೆ ತೇಲಿ ಬರುವ  ಆ  " ಅಮೃತ"  ಧಾರೆಗಾಗಿ.........

Saturday, November 7, 2009

ನಾವೂ ಅನಾಥರು... ಒಮ್ಮೊಮ್ಮೆ................................................................

ದೀಪಾವಳಿ ಮೊನ್ನೆ ಮೊನ್ನೆ ಮುಗಯಿತಲ್ಲ... ಅದರ ೨ ದಿನಗಳ ಮೊದಲು ಸುಮಾರು ೧೨-೧ ಘಂಟೆ ಮಧ್ಯಾಹ್ನದ ಹೊತ್ತು ನನ್ನ ಅಂಗಡಿಯಲ್ಲಿ ಕುಳಿತ್ತಿದ್ದೆ.  ಒಬ್ಬ ಸುಮಾರು ೨೫-೩೦ರ ವಯಸ್ಸಿನ ಯುವಕ ಬಂದು ನನ್ನೆದುರು ನಿಂತ. ನಾನು ಸ್ವಾಭಾವಿಕವಾಗಿ ಏನು ? ಎಂದೆ.
ನಾನು ಶಿವಮೊಗ್ಗದಿಂದ ಕಾರವಾರ ಹೋಗುವಾಗ , ನಿನ್ನೆ ರಾತ್ರಿ ಸಾಗರದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೇನೆ ಈಗ ಕನಿಷ್ಡ ಹೊನ್ನಾವರ ಹೋಗಲು ಬಸ್ ಖರ್ಚಿಗೆ ಹಣ ಬೇಕು ಎಂದು  ಹೇಳಿದ.
ನಾನು ಸ್ವಲ್ಲ ಕರುಣಾಳು ಆದರು ಕೂಡ ಆರೋಗ್ಯವಂತರಿಗೆ ಎನೂ ಕೊಡುವ ರಿವಾಜು ಇಟ್ಟುಕೊಂಡಿಲ್ಲ. ಆದರೂ ಹಬ್ಬದ ಎದುರು ನೋಡಿ...! ಸ್ವಲ್ಲ ದಯೆ ಬಂತು..!
ಹೊನ್ನಾವರ ಬಸ್ ಇದೆಯಾ ನೋಡು , ಇದ್ದರೆ ಬರ್ಸ ಚಾರ್ಜ್ ನಾನು ಕೊಡುತ್ತೇನೆಂದು ಹೇಳಿ, ಅಲ್ಲೆ ಬಂದ ನನ್ನ ಗೆಳೆಯನ ವಾಹನದಲ್ಲಿ ಕಳುಹಿಸಿದೆ.
ಹಿಂದಿನ ನನ್ನ ಅನುಭವಗಳ ಪ್ರಕಾರ ಬಸ್ ಟಿಕೇಟ್ ತೆಗೆಸುತ್ತೇನೆ ಎಂದರೆ ಆಸಾಮಿಗಳು ಪರಾರಿಯಾಗುತ್ತಿದ್ದರು, ಆದರೆ ಈ ಸಾರಿ
ಹತ್ತೇ ನಿಮಿಷಗಳಲ್ಲಿ ಆತ ಮರಳಿ ಬಂದು ೨-೩೦ಕ್ಕೆ ಬಸ್ ಇರುವುದಾಗಿ ಹೇಳಿದ. ನಾನು ಕೂಡ ನನ್ನ ಮಾತಿನಂತೆ ಬಸ್ ನಿಲ್ದಾಣಕ್ಕೆ ಆತನನ್ನು ಕರೆದೊಯ್ದು, ಟಿಕೇಟ್ ತೆಗಿಸಿ, ಆತನಿಗೆ ೧೦ ರೂ ಖರ್ಚಿಗೆ ಇಟ್ಟು ಬಂದೆ.
ಇದೆಲ್ಲ ಯಾಕೆ ಹೇಳತ್ತಾ ಇದ್ದೇನೆಂದ್ರೆ, ನಾವುಗಳು ಪರ ಊರಲ್ಲಿ  ಎಲ್ಲ ಕಳೆದುಕಂಡರೆ ನಮ್ಮ ಗತಿ ಏನಾಗಬಹುದು?
ದೇವರೇ ಗತಿ. ಅವನಲ್ಲಿ ೧ ರೂ ಕೂಡ ಇರಲಿಲ್ಲ ಹಾಗೂ ಸೆಲ್ ಫೋನ್ ಕೂಡ ಕಳೆದುಕೊಂಡಿದ್ದ.....

Wednesday, October 28, 2009

ಸೋದರಿಗೊಂದು ಆತ್ಮ ನಿವೇದನಾ ಪತ್ರ..............

ಪ್ರಿಯ ಸೋದರಿ,

ನಮ್ಮ ಪರಿಚಯ ಪಕ್ವವಾಗುತ್ತಿರುವ ಸಮಯದಲ್ಲಿ ದಿಢೀರನೆ ಹೀಗೆ ನಮ್ಮ ಸ್ನೇಹ ಭಾಂಧವ್ಯ
ಅಂತ್ಯಗೊಳ್ಳಬಹುದೆಂಬ ಕಲ್ಪನೇ ನನಗಿರಲಿಲ್ಲ.
ನೀವು ದೇವರು ಕೊಟ್ಟ ಸೋದರಿ ಎಂದು ಸಂತಸಗೊಂಡಿದ್ದೆ.
ಮೊನ್ನೆ ನೀವು ದೀಪಾವಳಿಗೆ ಹೊರಡುವ ಹಿಂದಿನ ದಿನ ನಿಮ್ಮನ್ನು ಹಬ್ಬಕ್ಕೆ ಬರಲು ಆಹ್ವಾನಿಸಿದ್ದಾಗ
 ಕೂಡನೀವು ನನ್ನೊಂದಿಗೆ ಸಹಜವಾಗಿದ್ದಿರಿ....

ಇಂಟರ್‍ನೆಟ್ನಲ್ಲಿ ಪರಿಚಯವಾದಾಗಿನಿಂದ ಒಡಹುಟ್ಟಿದ ಸೋದರಿಯಂತೆ ನಿಮ್ಮನ್ನು ಭಾವಿಸಿದ್ದೆ. ದಿನ,
 ಎರಡು ದಿನಗಳಿಗೊಮ್ಮೆ ನಿಮ್ಮ ವಿಷಯ
ತಿಳಿಯದಿದ್ದರೆ ಚಡಪಡಿಕೆ ಶುರುವಾಗುತ್ತಿತ್ತು.
ಆದರೆ ಇದು ಒಮ್ಮುಖ ಎಂಬ ಭಾವನೆಯ ಸುಳಿವೂ ನನಗೆ ತಿಳಿಯದಂತೆ ವ್ಯವಹರಿಸುತ್ತೀದ್ದಿರೆಂದು
 ತಿಳಿಯುವ ವೇಳೆಗೆ ತುಂಬಾ ಕಾಲ ಮಿಂಚಿತ್ತು.

ನನ್ನ ಸಂದೇಶಗಳಿಗೆ ಪ್ರತ್ಯ್ತುತ್ತರ ಇಲ್ಲದೇ ಹೋದಾಗ ಕಳವಳಗೊಂಡುಕರೆ ಮಾಡಿದಾಗ  ನೀವು ಸ್ವೀಕರಿಸಲಿಲ್ಲ,...
ಇದು ಮನಸ್ಸಿಗೆ ತುಂಬಾ ಆಘಾತವುಂಟು ಮಾಡಿತು.

ಮರಳಿ ಮರುದಿನ ಸಂಜೆ ಕರೆ ಮಾಡಿದಾಗ ಆಮೇಲೆ ಕರೆ ಮಾಡುವೆನೆಂದು ತಿಳಿಸಿ  ಸ್ವಲ್ಪ ಹೊತ್ತಿನಲ್ಲಿ
 ಇಂಟರ್‍ನೆಟ್ಗೆ ಬರಲು ತಿಳಿಸಿದಿರಿ. ಅದರಂತೆ ಲಾಗಿನ್ ಆದಾಗ,
ಏನು ಎತ್ತ ಎಂಬ ವಿವರಣೆ ಇಲ್ಲದೇ ಬರೀ ನನ್ನ ಮರೆತು ಬಿಡು ಎಂಬ ಪಲ್ಲವಿ-ಅನುಪಲ್ಲವಿಯೊಡನೆ
 ನಮ್ಮ ಪವಿತ್ರ ಸಂಬಂಧ ಕೊನೆಗೊಳಿಸುವ ಮಾತಿನೊಂದಿಗೆ ಸಂಪರ್ಕ
ಕಡಿತಗೊಳಿಸಿದಿರಿ.
 ಸುಮಾರು ಒಂದೂವರೆ ವರ್ಷದ ಸ್ನೇಹ , ಸೋದರ ಸಂಬಂಧ  ಈ ರೀತಿ ಪರ್ಯವಸನಗೊಳ್ಳುವದೆಂಬ
 ಕಲ್ಪನೆ ನನಗೆ ಬರಲಿಲ್ಲ.
ನಮ್ಮ ಪರಿಚಯದಲ್ಲಿ ನಾನೆಂದೂ ಸೀಮಾರೇಖೆ ಮೀರಿ ನೆಡೆದುಕೊಂಡಿರಲಿಲ್ಲ, ಅಲ್ಲವೇ?
ನನ್ನಂಥ ಭಾವನಾ ಜೀವಿಗಳು ಇಂದಿನ ಞಟಿ -ಬಿಟಿ ಯುಗಕ್ಕೆ ಅಪ್ರಸ್ತುತರೆಂದು ನಿರೂಪಿಸುವ ನಿಮ್ಮ ಪ್ರಯತ್ನ
 ಯಶಸ್ವಿಯಾದಂತೆ ತೋರುತ್ತಿದೆ...
ನನ್ನ ಯಾವ ತಪ್ಪಿಗೆ ನೀವು ನಮ್ಮ ಸಂಬಂಧ ಕಡಿದುಕೊಳ್ಳುವ ಮಾತಾಡುತ್ತಿರುವಿರೆಂದು ನನಗೆ ತಿಳಿಯುತ್ತಿಲ್ಲ.......
 ಭಾರತದಲ್ಲಿನ ಪುರಾತನ ನಂಬಿಕೆ ಎಂದರೆ ಪುನರ್‍ಜನ್ಮದ್ದು, ನಿಮಗೆ ಇದು ಹಾಸ್ಯಾಸ್ಪದ ಎನ್ನಿಸಿದರೂ
 ಚಿಂತೆಯಿಲ್ಲ, ನೀವು ಮುಂದಿನ ಜನ್ಮದಲ್ಲಾದರೂ ನನ್ನ ತಂಗಿಯಾಗಿಹುಟ್ಟಿ ಬರಲಿ ಎಂದು ಆಶಿಸುತ್ತೇನೆ.
ಆ ಸ್ಥಾನ ನಿಮಗಾಗಿ ನನ್ನ ಮನದಲ್ಲಿ  ಯಾವಾಗಲೂ ಇರುತ್ತದೆ.

ಅಗಲುವಿಕೆಯ ದು:ಖ ಮನದಲ್ಲಿ ಮಡುಗಟ್ಟಿದೆಯಾದರೂ ನೀವು ಮರಳಿ ಬರುವಿರೆಂಬ
  ನಿರೀಕ್ಷೆಯಲ್ಲಿರುವ,

ನಿಮ್ಮೊಲುಮೆಯ ಅಣ್ಣ.. (  ನಿಮ್ಮ ಕರೆಯ ನಿರೀಕ್ಷೆಯಲ್ಲಿ..)
 ಜಿತೇಂದ್ರ

Monday, October 19, 2009

ದೀಪಾವಳಿ... ದೊಡ್ಡ ಹಬ್ಬ.....







 ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ ತರುವ ಹಬ್ಬ.
ಮಳೆಗಾಲ ಮುಗಿದು ಸುಗ್ಗಿಯ ಮಂದಹಾಸವನ್ನು ಹೊತ್ತು  ಮನೆ ಮನಗಳನ್ನು ಬೇಳಗಲು ಬರುವ ಬೆಳಕಿನ ಹಬ್ಬ.

ಇದು ಹೆಚ್ಚಾಗಿ ಕೃಷಿಕರು, ತಮ್ಮ ಪಶು-ಕರು ಗಳನ್ನು ಪೂಜಿಸುವ, ವಣಿಕರು, ವ್ಯಾಪಾರಿಗಳು ಲಕ್ಷ್ಮಿ ಪೂಜೆ ಸಲ್ಲಿಸುವ, ಒಟ್ಟಾರೆ

ನಮ್ಮ ದಿನಚರಿಯಲ್ಲಿ ಉಪಯೋಗಿಸುವ, ವಾಹನಗಳು, ಹಣ, ಗೋವು, ನಮ್ಮ ತೋಟದಲ್ಲಿ ಬೆಳೆಯುವ ಬೆಳೆಯನ್ನು ಕೊಯ್ಯುವ ಮುನ್ನ , ಹೀಗೆ ಎಲ್ಲವನ್ನು ದೇವರೆಂದೇ ಪೂಜಿಸುವ  ವಿಶಿಷ್ಟ ಹಬ್ಬ ಈ ದೀಪಾವಳಿ.

ದೀಪಾವಳಿ ಮುಂಚಿನ ದಿನ ಬೆಳಿಗ್ಗೆ ಬೂರೆ ನೀರು ತುಂಬುವದರಿಂದ ಆರಂಭ, ಸನಜೆ ಅಮವಾಸ್ಯೆ , ಲಕ್ಷ್ಮಿ ಪೂಜೆ, ಮರುದಿನ ಬೆಳಿಗ್ಗೆ ಗೋಪೂಜೆ, ವಾಹನ ಪೂಜೆ ನಂತರ ನಮ್ಮಲ್ಲಿ ಗಡಿಮೆಡ್ಡಿಲ ಪೂಜೆ ಎಂದು ನಮ್ಮ ತೋಟದ ಕೆಲಸಕ್ಕೆ ಉಪಯೋಗಿಸುವ ಆಯುಧಗಳು, ಬುಟ್ಟಿ, ಒರಳು, ಬಂದೂಕು ತಕ್ಕಡಿ ಹಾಗೂ ಮನೆ ಬಳಕೆಯಲ್ಲಿರುವ ಹಲವು ಸಾಮಗ್ರಿಗಳನ್ನು ಪೂಜಿಸಲಾಗುತ್ತದೆ.

ಬೂರೆ ದಿನ ಪೂಜೆಗೆ ಚೀನಿಕಾಯಿ ಮತ್ತು ಸವತೆಕಾಯಿ ಕಡುಬನ್ನು  ಗೋವಿಗಾಗಿ ಮಾದಿ ತಿನ್ನಿಸುತ್ತೇವೆ. ಬಹುಶ: ಯಾವ ಹಬ್ಬದಲ್ಲೂ ನಾವು ಗೋವಿಗಾಗಿ ಸಿಹಿ ಮಾಡುವುದಿಲ್ಲ...!  ಹಾಗಾಗಿ ದೀಪಾವಳಿಯಲ್ಲಿ ಗೋಪೂಜೆಗೆ ಅಗ್ರ ಸ್ಥಾನ.

ಇನ್ನು ಮನೆ , ತೋಟದ ಸುತ್ತ-ಮುತ್ತ ಇರುವ ಭೂತ, ಇತ್ಯಾದಿ ಗಣಗಳಿಗೂ ತಂಗಿನಕಾಯಿ  ಅರ್ಪಿಸುವ ಕೆಲಸ ನಡೆಯುತ್ತದೆ.


ಹಬ್ಬದ ಹೋಳಿಗೆ ಪಾಯಸದೊಂದಿಗೆ  ಭೂರಿ ಭೋಜನ ನಡೆಯುತ್ತದೆ. ಹಾಗೂ ಸಂಜೆ ಉತ್ಸಾಹಿ ಯುವಕರು ಮನೆ ಮನೆಗೆ ದೀಪ ಕೊಂಡಯ್ಯುವ ಅಂಟಿಗೆ-ಪಂಟಿಗೆ ಎನ್ನುವ (ನಮ್ಮಲ್ಲಿ ಹಬ್ಬ ಹಾಡುವದು ಎನ್ನುತ್ತಾರೆ)  ಮನರಂಜನಾ ಕಾರ್ಯಕ್ರಮ ಕೆಲವು ಊರುಗಳಲ್ಲಿದೆ.

Sunday, October 11, 2009

ಇವತ್ತು ಊಟಿ, ಕೊಡೆಕೆನಾಲ್ ಎಲ್ಲ ನಮ್ಮ ಮನೆ ಮುಂಜಾವಲ್ಲಿತ್ತು........!





೭ ಘಂಟೆ ಆಗಿತ್ತೇನೋ.. ಹೊರಗೆ ಕಣ್ಣು ಹಾಯಿಸಿದರೆ ಎನೂ ಕಾಣಿಸದಷ್ಟು ಮಂಜು ಕವಿದಿದೆ..!
ಇದೇನೂ ವಿಶೇಷ ಅಲ್ಲ ಬಿಡಿ.
ಇದು ಪ್ರಕೃತಿಯ ಋತು ಬದಲಾವಣೆಯ ಸಮಯ......


ಹಾಗೆ ಮಧಾಹ್ನ ಕಾಫಿ ಸಮಯ ಎನೋ ಪಕ್ಷಿಯ ಕೂಗು ಕೇಳಿಸಿ ನೋಡಿದೆ,  ನಮ್ಮ ರಾಷ್ಟ್ರಪಕ್ಷಿ ನಮ್ಮ ಮನೆಯ ಹಸಿ ಮೆಣಸಿನ ಗಿಡ ಮೇಯುವುದರಲ್ಲಿ ತಲ್ಲೀನವಾಗಿತ್ತು......!

Tuesday, October 6, 2009

ಇದು ಈ ಬಾರಿಯ ಭೂಮಿ ಹುಣ್ಣಮೆ ಹಭ್ಭ


 ಈ ಬಾರಿ ಭೂಮಿ ಹಣ್ಣಿಮೆ ಹಬ್ಬ ಮಳೆಯಲ್ಲೇ ಆಚರಿಸುವಂತೆ ಆಯಿತು.
ಭೂಮಿ ಹುಣ್ಣಿಮೆ  ನಮ್ಮೆಲ್ಲರಿಗೂ ಸುಗ್ಗಿ ಆರಂಭವಾಗುವ ಸೂಚನೆ ಕೊಡುವ ಹಬ್ಬವಾಗಿದೆ.

ಇಲ್ಲಿ ನಾವು ಹಬ್ಬ ಆಚರಿಸುತ್ತಿದ್ದೇವೆ. ಆದರೆ ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುವಂತಿದೆ.
ನಾವು ಮಲೆನಾಡಿನ ಜನರು ತುಂಬಾ ಅನುಕೂಲಕರ ಹವಮಾನ ಭಾಗ್ಯ ಪಡೆದಿದ್ದೇವೆ. ಅತ್ತ ಅನಾವೃಷ್ಠಿಯೂ ಇಲ್ಲ, .
ಅತಿವೃಷ್ಟಿಯೂ ಇಲ್ಲ. ಇದು ನಮ್ಮ ಭಾಗ್ಯವೆಂದೇ ನನ್ನ ಅನಿಸಿಕೆ
ಹಬ್ಬದ ದಿನ ಭೂಮಿ ಪೂಜೆ ಈ ಹಬ್ಬದ ಆಚರಣೆ. ಈ ದಿನ  ನಮ್ಮ ತೋಟದಲ್ಲಿ ಅಡಿಕೆ, ತಂಗು ಮರಗಳಿಗೆ ತೋರಣ ಕಟ್ಟಿ,
ಒಂದು ಕಲ್ಲನ್ನು ಮರದ ಬುಡಕ್ಕೆ ಇಟ್ಟು ಅದನ್ನೇ ದೇವರೆಂದು ಪೂಜಿಸುವುದು ನಮ್ಮ ವಾಡಿಕೆ.

Tuesday, September 15, 2009

ನಮ್ಮ ಮನೆಯ ಊಟದ ಸಂಗಾತಿಗಳು.....

ನಮ್ಮ ಹವ್ಯಕರಲ್ಲಿ ಊಟಕ್ಕೆ ಕೂರುವ ಮೊದಲು ಕಾಗೆಗಳಿಗೆ ಅಥವಾ ಹಸುಗಳಿಗೆ ಗ್ರಾಸ, ಅಂದರೆ ಅನ್ನ ಅಥವಾ ಪದಾರ್ಥ ಇಡುವ ಸಂಪ್ರದಾಯ ಹಲವರಲ್ಲಿ ಇದೆ.

ಇದು ಇತ್ತೀಚೆಗೆ ಮರೆಯಾಗುತ್ತಿದೆ ಕೂಡ. ನಮ್ಮ ಮನೆಯಲ್ಲೇನು ಇದನ್ನು ಕಟ್ಟು-ನಿಟ್ಟಾಗಿ ಆಚರಿಸುತ್ತಿರಲಿಲ್ಲ.

ನಮ್ಮಅಡಿಗೆ ಮನೆ ಕಿಟಕಿಯಲ್ಲಿ ಒಂದು ಒಂಟಿ ಕಾಲಿನ ಕಾಗೆ ( ಬಹುಶ: ಕರೆಂಟ್ ತಗುಲಿ ಒಂದು ಕಾಲು ಕಳೆದು ಕೊಂಡಿರ ಬಹುದು)

ತೊಂಡೆಬಳ್ಳಿ ಚಪ್ಪರದ ಮೇಲೆ ಕೂತು , ಬೆಳಿಗ್ಗೆ ಹಾಗೂ ಮಧ್ಯಾಹ್ನ ಕೂಗತೊಡಗಿತು. ನಮ್ಮ ಅಮ್ಮ , ಅತ್ತಿಗೆ ಪಾಪ ಅಂಗವಿಕಲ ಪಕ್ಷಿ
ಎಂದು ದೋಸೆಯೋ, ರೊಟ್ಟಿ ಚೂರನ್ನೋ ನೀಡ ತೊಡಗಿದರು. ಈಗ ಅದೊಂದೆ ಅಲ್ಲದೇ ಅದರ ಸ್ನೇಹಿತರೂ ಸೇರಿ ಹತ್ತಾರು

ಕಾಗೆಗಳು ಬೆಳಿಗ್ಗೆ- ಮಧ್ಯಾಹ್ಣ ಕಾಯಂ ಅತಿಥಿಗಳು......!

ಸಮಸ್ಯೆ ಎನೂ ಅಂತೀರಾ?! ಮೊದಲು ಮಾಡುವ ೨-೩ ರೊಟ್ಟಿ, ದೋಸೆಗಳು ಅತಿಥಿಗಳಿಗೇ ಮೀಸಲು.....!!!!

ಇಲ್ಲವಾದರೆ ಕಿವಿಗೆ ಹತ್ತಿ ಹಾಕಿಕೊಳ್ಳು ಪರಿಸ್ಥಿತಿ ಬಂದಿದೆ.

ಆದರೆ ನಾವೇನೂ ಇದರಿಂದ ಬೇಸರಗೊಂಡಿಲ್ಲ. ಕಾಗೆಗಳ ಈ ಪರಿಸ್ಥಿತಿಗೆ ನಾವುಗಳೂ ಪರೋಕ್ಷ ಕಾರಣವಾಗದ್ದೇವೇನೋ ಅನ್ನಿಸುತ್ತದೆ. ಮೊದಲು ಹಳ್ಳಿಗಳಲ್ಲಿ ಎಲ್ಲರೂ ಊಟ ಮಾಡಲು ಸಾಧಾರಾಣವಾಗಿ ಬಾಳೆ ಎಲೆ ಬಳಸುತ್ತಿದ್ದರು, ಕಾಲಾಂತರದಲ್ಲಿ

ಊಟಕ್ಕೆ ತಟ್ಟೆ ಬಳಕೆ ಹೆಚ್ಚಾಗಿ ಪ್ರಾಣಿ ಪಕ್ಷಿಗಳಿಗೆ ಎನೂ ದೊರಕದಂತಾಗಿದೆ.